UK Express Logo

ಭಟ್ಕಳದಲ್ಲಿ ಯುಎಇ ನಕಲಿ ನೋಟು ದಂಧೆ ಬಯಲು: ಲಕ್ಷಾಂತರ ರೂ. ಮೌಲ್ಯದ ನೋಟುಗಳ ಜಪ್ತಿ!

By UKExpress on 7/27/2025

Picsart-25-07-27-15-32-25-841 ಭಟ್ಕಳ: ನಗರದ ಬಂದರ್ ರಸ್ತೆಯಲ್ಲಿ ನಕಲಿ ಯುಎಇ ದಿರಹಮ್ ನೋಟುಗಳನ್ನು ವಿನಿಮಯ ಮಾಡಲು ಯತ್ನಿಸುತ್ತಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ದಿರಹಮ್ ನೋಟುಗಳು, ಮೊಬೈಲ್ ಫೋನ್‌ಗಳು, ಎಟಿಎಂ ಕಾರ್ಡ್‌ಗಳು ಮತ್ತು ಕಾರು ಸೇರಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಯನ್ನು ರವೀನ ಪ್ರಕಾಶ್ (44) ಎಂದು ಗುರುತಿಸಲಾಗಿದೆ. ಸಿಪಿಐ ದಿವಾಕರ್ ಪಿ.ಎಂ. ಅವರ ನೇತೃತ್ವದಲ್ಲಿ ನಡೆದ ದಿಟ್ಟ ಕಾರ್ಯಾಚರಣೆಯಲ್ಲಿ ರವೀನನನ್ನು ವಶಕ್ಕೆ ಪಡೆಯಲಾಯಿತು. ಬಂಧಿತನಿಂದ ಮೂರು ಮೊಬೈಲ್ ಫೋನ್‌ಗಳು, ನಾಲ್ಕು ಎಟಿಎಂ ಕಾರ್ಡ್‌ಗಳು, ಒಂದು ಡೆಬಿಟ್ ಕಾರ್ಡ್, ಒಂದು ಮಾರುತಿ ಸ್ವಿಫ್ಟ್ ಕಾರು ಹಾಗೂ ಯುಎಇ ದೇಶದ 17 ನಕಲಿ 1000 ದಿರಹಮ್ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಪ್ರತಿ ನಕಲಿ ನೋಟಿಗೆ ಸುಮಾರು 22,000ರಿಂದ 23,000 ರೂಪಾಯಿ ಮೌಲ್ಯವಿರಬಹುದೆಂದು ಅಂದಾಜಿಸಲಾಗಿದೆ. ಸುಮಾರು 20 ವರ್ಷಗಳ ಕಾಲ ಓಮನ್‌ನಲ್ಲಿ ಉದ್ಯೋಗದಲ್ಲಿದ್ದ ರವೀನ, ಅಲ್ಲಿಯೇ ನಕಲಿ ನೋಟುಗಳನ್ನು ತಯಾರಿಸಿಕೊಂಡು ಭಾರತಕ್ಕೆ ಮರಳಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ಶಿರೂರು, ಕಟಪಾಡಿ ಮತ್ತು ಉಡುಪಿಯ ವಿವಿಧ ಮನಿ ಎಕ್ಸ್‌ಚೇಂಜ್ ಕೇಂದ್ರಗಳಲ್ಲಿ ನಕಲಿ ದಿರಹಮ್‌ಗಳನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಪ್ರಯತ್ನಿಸಿದ್ದ. ಕೆಲವೊಂದು ಸ್ಥಳಗಳಲ್ಲಿ ಆತನ ಈ ಯೋಜನೆ ಯಶಸ್ವಿಯೂ ಆಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇತ್ತೀಚೆಗಷ್ಟೇ ಭಟ್ಕಳದ ಆಝಾದ್ ನಗರದಲ್ಲಿ ವ್ಯಕ್ತಿಯೊಬ್ಬನಿಗೆ ನಕಲಿ ನೋಟು ನೀಡಿ ವಂಚಿಸಿದ್ದ ಪ್ರಕರಣವೂ ವರದಿಯಾಗಿದೆ. ಆರೋಪಿಯು ಹೆಚ್ಚಿನದೊಮ್ಮೆ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ, ಅನುಭವಿ ಸಿಬ್ಬಂದಿ ಇಲ್ಲದ ಸಮಯವನ್ನು ಆಯ್ದುಕೊಂಡು ಮನಿ ಎಕ್ಸ್‌ಚೇಂಜ್ ಕೇಂದ್ರಗಳಿಗೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಆಧರಿಸಿ ಭಟ್ಕಳ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಆರೋಪಿಗೆ ಜುಲೈ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಕಾರವಾರದ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.